ಎರಡು ಮಾತು

-ರಮೇಶ ಅದ್ಯಪಾಡಿ

ಶ್ರೀಮತಿ ಸುಂದರಿಯಮ್ಮನವರದ್ದು ತುಂಬು ಸಂಸಾರ. ಸಂತೃಪ್ತ ಕುಟುಂಬ. ಓರ್ವ ಆದರ್ಶ ಗೃಹಿಣಿಯಾಗಿ, ತಾಯಿಯಾಗಿ, ಅಜ್ಜಿಯಾಗಿ, ಮುತ್ತಜ್ಜಿಯಾಗಿ, ಅವರು ಈ ಸಂಸಾರಕ್ಕೆ ನೀಡಿದ ಕೊಡುಗೆ ಅಪಾರ. ಅವರು ಕಟ್ಟಿ ಬೆಳೆಸಿದ ಬದುಕು ನಡೆದು ಬಂದ ದಾರಿ. ಸಾಧಿಸಿದ ಸಾಧನೆ ನಿಜಕ್ಕೂ ಊಹೆಗೂ ನಿಲುಕಲಾರವು.

ಇಂತಹ ಅಮೃತಮಯವಾದ ಸನ್ನಿವೇಶದಲ್ಲಿ ಉಪನಿಷತ್ತಿನ ಒಂದು ಶ್ಲೋಕ ನೆನಪಿಗೆ ಬರಿತ್ತದೆ. “ಕುರ್ವನ್ನೆವೇಹ ಕರ್ಮಾಣೆ ಜಿಜೀವಿಷೀತ್ ಶತಂ ಸಸಾಮಾಃ|” ನಾವು ಉತ್ತಮ ಕರ್ಮಗಳನ್ನು ಮಾಡುವವರು ಆಗಿ ನೂರು ವರುಷಗಳ ಕಾಲ ಬದುಕಬೇಕು. ಒಟ್ಟಿನಲ್ಲಿ ಅವರ ಜೀವನ ಮತ್ತು ಸಾಧನೆಯನ್ನು ವಿಮರ್ಶಿಸಿದಾಗ ಮಂಕುತಿಮ್ಮನ ಕಗ್ಗದಲ್ಲಿರುವಂತೆ ‘ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು| ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೇ| ಬೆಲ್ಲ ಸಕ್ಕರೆಯಾಗು.. ಎಲ್ಲರೊಳಗೊಂದಾಗು...ಎನ್ನುವ ಸಾಲುಗಳು ನೂರಕ್ಕೆ ನೂರರಷ್ಟು ಸತ್ಯ ಎಂದು ತೋರುತ್ತದೆ. ಕೊನೆಯದಾಗಿ, ಶ್ರೀಮತಿ ಸುಮ್ದರಿಯಮ್ಮನವರು ನಮ್ಮೆಲ್ಲರ ಹಿರಿತಾಯಿಯಾಗಿ ಇನ್ನಷ್ಟು ಆರೋಗ್ಯವಂತರಾಗಿ, ಇನ್ನಷ್ಟು ಅನುಭವಗಳನ್ನು ಹಂಚಿಕೊಂಡು, ಎಲ್ಲರನ್ನು ಆಶೀರ್ವದಿಸುತ್ತ ನುಉರುಕಳ ಬದುಕಲಿ ಎಂದೇ ನಮ್ಮೆಲ್ಲರ ಹಾರೈಕೆ.

ಒಂದು ನೋಟ

-ಸತೀಶ್ ರಾವ್

ಅದ್ಯಪಾಡಿಯಲ್ಲಿ ಬಂಧುಬಳಗದವರೆಲ್ಲರೂ ಒಟ್ಟು ಸೇರಿ ವಿಶೇಷವಾಗಿ ಸುಂದರಿಯಮ್ಮನವರನ್ನು ಗೌರವಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಕಂಡು ಸಂತೋಷವಾಯಿತು.

ಜೀವನ ಪಯಣ ಒಂದು ನದಿಯಂತೆ. ಯಾವುದೇ ಬೆಟ್ಟದ ತಪ್ಪಲಲ್ಲಿ ಹುಟ್ಟಿ, ಗೊತ್ತು ಗುರಿಯಿಲ್ಲದ ಕಡೆಯತ್ತ ಸಾಗಿ . ತನ್ನ ಸುತ್ತಣ ಪರಿಸರವನ್ನು ತಂಪಾಗಿಸಿ ಸಾವಿರಾರು ಜನರಿಗೆ ಜೀವನ ಆಶ್ರಯಧಾತವಾಗಿ ಕೊನೆಗೆ ಶಾಂತವಾಗಿ ಸಾಗರವನ್ನು ಸೇರಿ ತನ್ನ ಹುಟ್ಟನ್ನು ಸಾರ್ಥಕ ಪಡಿಸುತ್ತದೆ. ಒಂದು ಅರ್ಥದಲ್ಲಿ ನೋಡಿದರೆ ಸುಮ್ದರಿಯಮ್ಮನವರ ಬದುಕಲ್ಲಿ ಇದು ನೂರಕ್ಕೆ ನೂರರಷ್ಟು ಸತ್ಯ.

ಬಹುಶಃ ಅವರು ಹುಟ್ಟುವಾಗ ಅವರಿಗೆ ತಿಳಿದಿರಲಿಕ್ಕಿಲ್ಲ ಮುಂದೆ ತಾನೊಂದು ಇಂತಹ ಸುಂದರ ಸಂಸಾರದ ಕಾರಣಕರ್ತೆಯಾಗುವೆ ಎಂದು. ಈ ಸಂಸಾರ ಈ ಪರಿ ಬೆಳೆದಿರುವುದನ್ನು ಕಂಡರೆ ನಿಜಕ್ಕೂ ಸುಮ್ದರಿಯಮ್ಮನವರು ಧನ್ಯರು. ಈ ಮಹಾತಾಯಿ ಪರಮಭಾಗ್ಯಶಾಲಿ.

ತಮ್ಮ ಜೀವನದುದ್ದಕ್ಕೂ ಕಷ್ಟ, ನಷ್ಟ, ನೋವುಗಳು ಎದುರಾದರೂ ತಾನು ನಂಬಿದ ದೈವವನ್ನೇ ಮುಂದಿಟ್ಟುಕೊಂಡು ಸದಾ ಎಲ್ಲರ ಹಿತವನ್ನು ಬಯಸಿದರು.

ಈ ಇಳಿ ವಯಸ್ಸಿನಲ್ಲೂ ಅವರ ನೆನಪು ಶಕ್ತಿ ಅಗಾಧ. ಅವರ ಪ್ರೀತಿಯ ನುಡಿ, ಮನಬಿಚ್ಚಿ ಆಡುವ ಮಾತು, ಮುಗ್ಧ ನೋಟ ನಮ್ಮನ್ನು ನಾವೇ ನಾಚಿಕೊಳ್ಳುವಂತೆ ಮಾಡುತ್ತವೆ. ಅವರ ಆರೋಗ್ಯ ಚೆನ್ನಾಗಿರಲಿ. ಅವರು ಶತಾಯುಶಿಯಾಗಲಿ. ಸಕಲ ಸುಭಾಗ್ಯವನ್ನು ಅವರು ಅನುಭವಿಸಲಿ ಎಂದು ಶ್ರೀ ದೇವರಲ್ಲಿ ಪ್ರಾರ್ಥಿಸುವ ಸುಮ್ದರಿಯಮ್ಮನ ಕಿರಿಯ ಅಳಿಯ.

ಮನದ ಮಾತು

-ಶಶಿಕಾಂತ ಅದ್ಯಪಾಡಿ

‘ಸರಪಳಿ' ಈ ಅಪರೂಪವಾದ, ಸುಂದರಿಯಮ್ಮನವರ ಸಂಸಾರದ ಸಂಪೂರ್ಣ ಭಾವಚಿತ್ರಗಳ ಸಂಗ್ರಹಕ್ಕೆ ತೊಡಗಿದ್ದೇ ಒಂದು ಮಹತ್ವದ ಕಾರ್ಯ ದೂರದೂರದ ಊರಿನಲ್ಲಿ ನೆಲೆಸಿರುವ ಬಂಧುಗಳ ಭಾವಚಿತ್ರಗಳನ್ನು ಸಂಗ್ರಹಿಸಲು ತೊಡಗಿದಾಗ ಉತ್ತಮ ಪ್ರತಿಕ್ರಿಯೆ ಬಂತು. ಎಲ್ಲರೂ ಕ್ಲಪ್ತ ಸಮಯದಲ್ಲಿ ತಮ್ಮ ತಮ್ಮ ಭಾವಚಿತ್ರಗಳನ್ನು ಕಳುಹಿಸಿಕೊಟ್ಟರು. ಅವುಗಳನ್ನು ಒಂದೊಂದಾಗಿ ಜೋಡಿಸುತ್ತಾ ಹೋದಂತೆ ಸಂಸಾರ ಸಂಬಂಧದ ಸರಪಳಿ ಅದ್ಭುತವಾಗಿ ವಿಸ್ತರಿಸುತ್ತಿರುವುದು ಕಂಡು ಆಶ್ಚರ್ಯವಾಯಿತು. ಈ ಸರಪಳಿಯ ಒಂದೊಂದು ಕೊಂಡಿ ಅದ್ಯಪಾಡಿಯ ಅನರ್ಘ್ಯ ಜೀವಕುಡಿ.ಇವರ ಪ್ರೀತಿಯ ನುಡಿ, ಮೋಹಕ ಮೋಡಿ, ಗಡಿಬಿಡಿಯಿಲ್ಲದ ಬದುಕಿನಡಿ ಅಡಿಗಡಿಗೆ ಗುರುಹಿರಿಯರನ್ನು ದೈವದೆವರನ್ನು ನೆನೆಯುವ ಪಡಿ ನರನಾಡಿಗಳಲ್ಲಿ ಹರಿದಾಡುವ ರಕ್ತ ಅದ್ಯಪಾಡಿಯದ್ದೆ ಎನ್ನುವ ಗಟ್ಟಿ ನುಡಿ ಸಂಸಾರ ಸರಪಳಿಯನ್ನು ಇನ್ನಷ್ಟು ಶಕ್ತಿ ತುಂಬಿ ಉಕ್ಕಿನ ಶಕ್ತಿಯ ಬಂಗಾರದ ಸರಪಳಿಯಾಗಿ ಬೆಳೆಯಲಿ ಎನ್ನುವ ನನ್ನ ಮನದಾಸೆಯನ್ನು ನಿಚ್ಚಳವಾಗಿಸಿತು.

ಈ ಪುಸ್ತಕವನ್ನು ಹೊರತರುವಲ್ಲಿ ವಿಶೇಷವಾಗಿ ಸಹಕರಿಸಿ ಇದರ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡ ‘ಸ್ವಾತಿಭಟ್ಟ'ರೆಂದು ಕಿನ್ನಿಗೋಳಿ ಪರಿಸರದಲ್ಲಿ ಖ್ಯಾತಿವೆತ್ತ ಶ್ರೀಯುತ ಸತೀಶರಾಯರಿಗೆ ಕೃತಜ್ಞತೆಗಳು.

ಮುಖಪುಟ ಹಾಗೂ ಇತರ ಮುದ್ರಣ ಕಾರ್ಯಗಳಿಗೆ ಸಹಕರಿಸಿದ ‘ಅನಂತ ಪ್ರಕಾಶ’ ಕಿನ್ನಿಗೋಳಿ ಇವರಿಗೂ ಅಭಿನಂದನೆಗಳು.

ಕೊನೆಯದಾಗಿ ನನ್ನ ಹಿರಿಯರೇ, ಆತ್ಮೀಯರೇ ನಿಮ್ಮ ಸ್ಪಂದನೆಗೆ ನಾನು ಸದಾ ಸಿಧ್ಧ ಮತ್ತು ಋಣಿ. ಇದರಲ್ಲಿ ಏನಾದರೂ ಭಾವಚಿತ್ರಗಳನ್ನು ಮುದ್ರಿಸುವಾಗ ಇಲ್ಲವೇ ಯಾರದ್ದಾದರೂ ಊರು, ಹೆಸರು ಇತ್ಯಾದಿ ಲೋಪ ದೋಷವಾಗಿದ್ದರೆ ಕ್ಷಮಿಸುವಿರೆಂದು ತಿಳಿಯುತ್ತೇನೆ. ಹಾಗೆಯೇ ಅದ್ಯಪಾಡಿ ಪರಿವಾರದ ಪ್ರತಿಯೊಂದು ಮನೆಯವರು ಈ ಪುಸ್ತಕವನ್ನು ಕೊಂಡು ತಮ್ಮ ಸಂಗ್ರಹದಲ್ಲಿ ಇಡುವಿರಿ ಎಂದು ಭಾವಿಸುತ್ತೇನೆ.

ಮುಂದೆ ಇದೇ ರೀತಿ ಪ್ರತಿ ವರ್ಷವೂ ಹರುಷದಿಂದ ಅದ್ಯಪಾಡಿ ಪಾಟೀಲರ ಮನೆಯಲ್ಲಿ ಬೇಸಿಗೆಯ ಎರಡು ದಿನದ ಕಾರ್ಯಕ್ರಮಗಳು ಇಡೀ ಸಂಸಾರದ ಕೂಡುವಿಕೆಯಿಂದ ನಿರಂತರವಾಗಿ ನಡೆಯಲಿ ಎಂದು ಮತ್ತೊಮ್ಮೆ ಆಶಿಸುತ್ತೇನೆ.